ಪೈಪರೇಸೀ - ಮೆಣಸು, ವೀಳ್ಯೆದೆಲೆ ಮುಂತಾದ ಗಿಡಗಳನ್ನು ಒಳಗೊಂಡ ಸಸ್ಯಕುಟುಂಬ.  ಈ ಕುಟುಂಬದ ಗಿಡಗಳೆಲ್ಲವೂ ಸಾಮಾನ್ಯವಾಗಿ ಬಳ್ಳಿಗಳು.  ಬೇರೆ ಮರ ಅಥವಾ ಬೊಂಬುಗಳ ಮೇಲೆ ಅಡರಿ ಬೆಳೆಯುವ ಈ ಬಳ್ಳಿಗಳು ನೋಡಲು ಸುಂದರ.  ಎಲೆಗಳು ಗೆಣ್ಣುಗಳಲ್ಲಿ ಒಂಟೊಂಟಿಯಾಗಿಯೊ ಜೋಡಿಗಳಲ್ಲೊ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವುವು.  ವೃಂತಪರ್ಣ ಎಲೆಯ ತೊಟ್ಟಿಗೆ ಅಂಟಿಕೊಂಡುರುತ್ತದೆ.  ಎಲೆಗಳ ಆಕಾರ ಹೃದಯದಂತೆ.  ಎಲೆಯ ಕಂಕುಳಲ್ಲಿ ಅಥವಾ ಬಳ್ಳಿಯ ತುದಿಯಲ್ಲಿ ಉದ್ದವಾದ ಹೂಗೊಂಚಲು ಇರುವುವು.  ಹೂಗಳು ಏಕಲಿಂಗಿ ಅಥವಾ ದ್ವಿಲಿಂಗಿಗಳು.  ಹೂಗಳಲ್ಲಿ ಪುಷ್ಪಪತ್ರವಾಗಲೀ ಪುಷ್ಪದಳಗಳಾಗಲೀ ಇಲ್ಲ.  ಕೇವಲ 1-10 ಕೇಸರಗಳೂ ಅಂಡಾಶಯವೂ ಇರುವುವು.  ಇವುಗಳ ಬಣ್ಣ ತಿಳಿಹಸುರು.  ಅಂಡಾಶಯದಲ್ಲಿ ಒಂದೇ ಒಂದು ಅಂಡಕೋಶವೂ ಅದರೊಳಗೆ ಒಂದೇ ಒಂದು ಬೀಜವೂ ಉಂಟು.  ಅಂಡಾಶಯದಲ್ಲಿ ಶಲಾಕವಿಲ್ಲ, ಬರೀ ಶಲಾಕಾಗ್ರ ಮಾತ್ರ ಇದೆ.  ಪೈಪರ್, ಪೆಪರೋಮಿಯ, ಹೆಕೇರಿಯ ಮುಂತಾದವು ಪ್ರಮುಖ ಜಾತಿಗಳು.  ಪೈಪರ್ ನೈಗ್ರಂ ಎಂಬುದೇ ಮೆಣಸು (ಒಳ್ಳೆ ಮೆಣಸು).  ಇದರ ಒಣಗಿದ ಕಾಯಿ ಸಂಬಾರ ಪದಾರ್ಥವಾಗಿ ಬಲು ಪ್ರಸಿದ್ಧವಾಗಿದೆ.  ಉದ್ದ ಮೆಣಸು ಮತ್ತು ಬಾಲಮೆಣಸು ಸಹ ಈ ಕುಟುಂಬದ ಸದಸ್ಯಗಳು.  ಇವಕ್ಕೆ ಪೈಪರ್ ಲಾಂಗಮ್ ಮತ್ತು ಪೈಪರ್ ಕ್ಯುಬೆಬ ಎಂಬ ವೈಜ್ಞಾನಿಕ ಹೆಸರುಗಳುಂಟು.  ಕಾಯಿಯನ್ನು ಉಪ್ಪಿನಕಾಯಿ ಹಾಕುತ್ತಾರೆ.  ಪೈಪರ್ ಮಿರಿಸ್ಟಿಕಂ ಎಂಬ ಇನ್ನೊಂದು ಪ್ರಭೇದದ ಬೇರಿನಿಂದ ಕಾವ ಎಂಬ ಪಾನೀಯವನ್ನು ತಯಾರಿಸುತ್ತಾರೆ.

	ವೀಳ್ಯೆದೆಲೆ (ಪೈಪರ್ ಬೆಟಲ್) ಈ ಕುಟುಂಬದ ಮತ್ತೊಂದು ಮುಖ್ಯ ಗಿಡ.  ಮಲೇಶಿಯ ಇದರ ತವರು.  ಪೆಪರೋಮಿಯ ಗಿಡದ ಎಲೆಯ ರಸವನ್ನು ಹೊಟ್ಟೆನೋವು, ತಲೆನೋವು ಮತ್ತು ಜ್ವರಕ್ಕೆ ಉಪಯೋಗಿಸುತ್ತಾರೆ.  ಮೂತ್ರಪಿಂಡದ ಕಾಯಿಲೆಗಳಿಗೂ, ಬ್ಯಾಕ್ಟೀರಿಯ ನಾಶಕವಾಗಿಯೂ ಇದು ಪ್ರಯೋಜನಕಾರಿ. 																		(ಎ.ಸಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ